ಬೆಂಗಳೂರು

'ಸೈನ್ಸ್' ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ, ಜೀವವೈವಿಧ್ಯತೆಯ ಒಡಂಬಡಿಕೆಯೇ ಜೀವವೈವಿಧ್ಯತೆಯ ಸಂಶೋಧನೆಗಳ ಮೇಲೆ ಮಿತಿ ಹೇರುವುದನ್ನು ಪ್ರಶ್ನಿಸಿ, ಬೇಲಿಯೇ ಎದ್ದು ಹೊಲ ಮೇದಂತಾಯ್ತು ಎಂದು ಟೀಕಿಸಲಾಗಿದೆ. ಜೀವವೈವಿಧ್ಯತೆಯ ಒಡಂಬಡಿಕೆ ಎಂಬುದು ಜೀವವೈವಿಧ್ಯತೆಯ ಸಂರಕ್ಷಣೆಗಾಗಿಯೇ ರೂಪುಗೊಂಡ ನೀತಿ ಚೌಕಟ್ಟು; ಈ ಅಂತರಾಷ್ಟ್ರೀಯ ಒಪ್ಪಂದಕ್ಕೆ ೧೬೮ ರಾಷ್ಟ್ರಗಳು ಸಹಿ ಹಾಕಿದ್ದು, ಇದು ೧೯೯೩ರ ಡಿಸೆಂಬರ್ ೨೯ರಂದು ಜಾರಿಗೊಂಡಿತು. ಈ ಒಪ್ಪಂದದ ಪ್ರಮುಖ ಉದ್ದೇಶಗಳು, ಜೀವವೈವಿಧ್ಯ ಸಂರಕ್ಷಣೆ, ಜೀವವೈವಿಧ್ಯದ ಸಮರ್ಥ ಬಳಕೆ ಮತ್ತು ಸಸ್ಯಗಳು, ಪ್ರಾಣಿಗಳು, ಅಥವಾ ಸೂಕ್ಷ್ಮಾಣುಜೀವಿಗಳ ತಳೀಯ ಸಂಪನ್ಮೂಲಗಳಿಂದ ಉಂಟಾಗುವ ಪ್ರಯೋಜನಗಳ ನ್ಯಾಯೋಚಿತ ಮತ್ತು ಸಮಾನವಾದ ಹಂಚಿಕೆಯನ್ನು ಒಳಗೊಂಡಿವೆ; ಈ ಉದ್ದೇಶಗಳಲ್ಲಿ ಕೊನೆಯದ್ದನ್ನು, ನಾಗೊಯಾ ಶಿಷ್ಟಾಚಾರದಲ್ಲಿ ಮತ್ತಷ್ಟು ಕ್ರಮಬದ್ಧಗೊಳಿಸಲಾಗಿದೆ.

"ಜೀವವೈವಿಧ್ಯತೆ ಎಂಬುದು ಸಸ್ಯಗಳು, ಪ್ರಾಣಿಗಳು, ಸೂಕ್ಷ್ಮಾಣುಜೀವಿಗಳು, ಅವುಗಳ ಪರಿಸರವ್ಯವಸ್ಥೆಗಳು-ಇವಷ್ಟೇ ಅಲ್ಲದೇ, ಅದಕ್ಕಿಂತಲೂ ಹೆಚ್ಚಿನದ್ದಾಗಿದ್ದು, ಇದು ಜನರು, ಅವರ ಆಹಾರ ಸುರಕ್ಷತೆ, ಔಷಧಗಳು, ತಾಜಾ ಗಾಳಿ, ಶುದ್ಧ ನೀರು, ವಾಸಿಸಲು ಸ್ವಚ್ಛ ಆರೋಗ್ಯಕರ ವಾತಾವರಣ - ಇವೆಲ್ಲಾವುದನ್ನೂ ಒಳಗೊಂಡಿದೆ. ಇದನ್ನು ಜೀವವೈವಿಧ್ಯತೆಯ ಒಡಂಬಡಿಕೆಯು ಗುರುತಿಸುತ್ತದೆ" ಎನ್ನುತ್ತದೆ ಅವರ ಜಾಲತಾಣ. ಈ ಒಡಂಬಡಿಕೆಯ ಉದ್ದೇಶವು ಹಿತಕರವೆಂದು ತೋರುತ್ತದಾದರೂ, ಅದರ ನೀತಿಸಂಹಿತೆಯು ತನ್ನ ಉದ್ದೇಶಿತ ಗುರಿಯನ್ನೇ ಸೋಲಿಸುತ್ತಿದೆ ಎಂದು ಪ್ರಸ್ತುತ ಲೇಖನದ ಲೇಖಕರು ವಾದಿಸುತ್ತಾರೆ. ೩೫ ದೇಶಗಳ ೧೭೨ ಸಹಿದಾರ ಘಟಕಗಳ ಬೆಂಬಲದೊಂದಿಗೆ, ಈ ಒಡಂಬಡಿಕೆಯ ವಿಪರೀತ ನಿಯಂತ್ರಕ ಆಡಳಿತವನ್ನು ವಿರೋಧಿಸುವ ಲೇಖಕರು, ಇದು ಜೀವವೈವಿಧ್ಯತೆಯ ಬಗೆಗಿನ ಸಂಶೋಧನೆಯ ಮೇಲೆ ಹೇರಿರುವ ಮಿತಿ, ಅಂತರರಾಷ್ಟ್ರೀಯ ಸಹಯೋಗದ ಮೇಲಿನ ನಿರ್ಬಂಧ ಹಾಗೂ ಆನುವಂಶಿಕ ಸಂಪನ್ಮೂಲಗಳ ನಿಧಿಗೆ ಸುಲಭ ಪ್ರವೆಶಾವಕಾಶದ ಮೇಲೆ ಹೇರಿರುವ ತಡೆಯನ್ನು ಪ್ರಶ್ನಿಸುತ್ತಾರೆ.

ಈ ಒಡಂಬಡಿಕೆಯ ಸದಸ್ಯ ರಾಷ್ಟ್ರಗಳು, ವಿಶೇಷವಾಗಿ, ಜೈವಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ದೇಶಗಳು, ವಾಣಿಜ್ಯಿಕ ಉದ್ದೇಶದಿಂದ ಸಂಪನ್ಮೂಲಗಳ ದುರುಪಯೋಗವಾಗುವ ಭೀತಿಯಿಂದ, ಜೀವವೈವಿಧ್ಯತೆಯ ಸಂಶೋಧನೆಗೆ ತೊಡಗುವ ಸ್ಥಳೀಯ ವಿಜ್ಞಾನಿಗಳ ಜೊತೆಗೆ ಅಂತರಾಷ್ಟ್ರೀಯ ಸಹಯೋಗಿ ವಿಜ್ಞಾನಿಗಳ ಮೇಲೂ ಕಾನೂನು ನಿರ್ಬಂಧಗಳನ್ನು ಜಾರಿಗೊಳಿಸುತ್ತಿದೆ ಎಂಬುದನ್ನು ಲೇಖಕರು ಗಮನಿಸಿದ್ದಾರೆ.

ಜೀವವೈವಿಧ್ಯ ಶ್ರೀಮಂತ ರಾಷ್ಟ್ರಗಳಲ್ಲಿನ ಜೀವವಿಜ್ಞಾನವು, ಈಗಾಗಲೇ ರಾಷ್ಟ್ರೀಯ ವಿಜ್ಞಾನ ನಿಧಿ ಸಂಸ್ಥೆಗಳ ನಿರ್ಲಕ್ಷ್ಯದಿಂದ ಬಳಲುತ್ತಿದೆ. ಪ್ರಕೃತಿಯ ಹೊರತಾಗಿ, ನಮ್ಮ ಜ್ಞಾನದ ಪ್ರಗತಿಯ ಅಂತಿಮ ಫಲಾನುಭವಿಯೆಂದರೆ ಅದು ಸಮಾಜವೇ; ಆದರೆ, ಕಠಿಣ ನಿಯಂತ್ರಕ ನೀತಿನಿಯಮಾವಳಿಗಳು, ಗುಣಾತ್ಮಕ ಫಲವನ್ನು ಸಂಕುಚಿತಗೊಳಿಸುತ್ತಿವೆ." ಎನ್ನುತ್ತಾರೆ ಪರಿಸರ ಮತ್ತು ಪರಿಸರೀಯ ವಿಜ್ಞಾನದ ಸಂಶೋಧನೆಗಾಗಿ ಇರುವ ಅಶೋಕ ಟ್ರಸ್ಟ್ ಸಂಸ್ಥೆಯ ಪ್ರೊ. ಕಮಲ್ಜಿತ್ ಬಾವಾ. ಇವರು ಈ ಲೇಖನದ ಲೇಖಕರೂ ಹಾಗೂ ಮೊದಲಬಾರಿಗೆ ಸಸ್ಯವಿಜ್ಞಾನ ಕ್ಷೇತ್ರದ ಪ್ರತಿಷ್ಠಿತ ಲಿನ್ನಿಯನ್ ಪದಕಕ್ಕೆ ಭಾಜನರಾದವರೂ ಹೌದು.

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ಸಂರಕ್ಷಣೆ ಎಂಬುದು ಕೇವಲ ಸಂಪನ್ಮೂಲಗಳನ್ನು ರಕ್ಷಿಸುವ ಮತ್ತು ಅವುಗಳ ನಷ್ಟವನ್ನು ತಡೆಗಟ್ಟುವ ಮೇಲೆ ಕೇಂದ್ರೀಕೃತ ರಕ್ಷಣಾತ್ಮಕ ಅಳತೆಯಾಗಿ ಕಂಡುಬರುತ್ತದೆ. ಆದರೆ, ಹೀಗೆ ಸಂರಕ್ಷಿಸಲ್ಪಟ್ಟ ಜೀವಿಗಳ ಗುರುತನ್ನು ತಿಳಿಯುವುದು ಕೂಡ ಅತ್ಯಗತ್ಯ. ಪ್ರಪಂಚದಲ್ಲಿ ೧೨ ದಶಲಕ್ಷ 'ಯುಕ್ಯಾರಿಯೋಟಿಕ್', ಅಂದರೆ, ಪೊರೆಯಿಂದ ಸುತ್ತುವರಿದ ಬೀಜಕಣವನ್ನುಳ್ಳ ಜೀವಿಗಳಿವೆ ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ ಔಪಚಾರಿಕವಾಗಿ ಕೇವಲ ೨ ದಶಲಕ್ಷಕ್ಕಿಂತಲೂ ಕಡಿಮೆ ಜೀವಿಗಳನ್ನು ಗುರುತಿಸುವುದು ಸಾಧ್ಯವಾಗಿದೆ. ಒಂದು ಪ್ರಭೇದವನ್ನು ಪರಿಣಾಮಕಾರಿಯಾಗಿ ಸಂರಕ್ಷಿಸಲು, ಅದರ ಪರಿಸರ, ಬೆದರಿಕೆಗೆ ಪ್ರತಿವರ್ತನೆ, ಮಾನವಜನ್ಯ ಚಟುವಟಿಕೆಗಳನ್ನೂ ಒಳಗೊಂಡಂತೆ ಆ ಪ್ರಭೇದವು ಎದುರಿಸಬಹುದಾದ ಮತ್ತಿತರ ತೊಂದರೆಗಳ ವೈಜ್ಞಾನಿಕ ತಿಳುವಳಿಕೆಯನ್ನು ಸಂಪಾದಿಸುವುದೂ ಅವಶ್ಯಕ.

ಭೂಮಿಯ ಮೇಲಿನ ಪ್ರತಿ ಐದು ಪ್ರಭೇದಗಳಲ್ಲೊಂದು, ಮಾನವಜನ್ಯ ಚಟುವಟಿಕೆಗಳ ಕಾರಣದಿಂದಾಗಿ ಅಳಿವಿನ ಅಪಾಯದಲ್ಲಿದೆ. ಅವುಗಳಲ್ಲಿ ಅನೇಕವು ಪತ್ತೆಯಾಗುವ ಮೊದಲೇ ಅವಶೇಷವಾಗಿ ಹೋಗುತ್ತವೆ ಎಂದು ಹೇಳಲಾಗುತ್ತದೆ; ವ್ಯವಸ್ಥಿತ ಜೀವಿವರ್ಗೀಕರಣ ಅಧ್ಯಯನಗಳು, ಜೀವವೈವಿಧ್ಯತೆಯ ಅರ್ಥೈಸಿಕೊಳ್ಳುವಿಕೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಇದಕ್ಕಾಗಿ, ಪ್ರಾದೇಶಿಕ ಗಡಿಯನ್ನು ಮೀರಿ ಸಹಭಾಗಿತ್ವದಲ್ಲಿ ತೊಡಗುವ ಸಂಶೋಧಕರು, ಅಧಿಕಾರಶಾಹೀ ಅಡಚಣೆಗಳಿಲ್ಲದೇ ಮಾದರಿಗಳ ಸುಲಭ ಸಂಗ್ರಹ ಮತ್ತು ಲಾಭೋದ್ದೇಶವಿಲ್ಲದ ಸಂಶೋಧನಾ-ಸಂಬಂಧಿತ ಚಟುವಟಿಕೆಗಳನ್ನು ಬೆಂಬಲಿಸುವ ಪರಿಸರ ವ್ಯವಸ್ಥೆ ಅಗತ್ಯ.

ಜೀವವೈವಿಧ್ಯತೆಯ ಒಡಂಬಡಿಕೆಯು ಜಾರಿಯಾದಾಗಿನಿಂದ, ಈ ಒಪ್ಪಂದದ ಭಾಗವಾದ ದೇಶಗಳು ತಮ್ಮ ವ್ಯಾಪ್ತಿಯೊಳಗಿನ ಜೀವವೈವಿಧ್ಯಕ್ಕೆ ಒಡೆಯರಾಗಿದ್ದು, ತಮ್ಮ ಪ್ರದೇಶಗಳಲ್ಲಿನ ತಳೀಯ ಮತ್ತು ಜೀವವೈವಿಧ್ಯ ಸಂಪನ್ಮೂಲಗಳ ಮೇಲಿನ ಸಂಪೂರ್ಣ ನಿಯಂತ್ರಣ ಸಾಧಿಸಲು, ಅನೇಕ ಶಾಸಕಾಂಗ ನಿಯಮಾವಳಿಗಳನ್ನು ಹೇರಿವೆ. ಹಾಗಾಗಿ, ಸಂರಕ್ಷಿತ ಪ್ರದೇಶಗಳನ್ನು, ಪ್ರಮುಖವಾಗಿ ದಕ್ಷಿಣ ಏಷ್ಯಾ, ಪೂರ್ವ ಆಫ್ರಿಕಾ, ಮತ್ತು ದಕ್ಷಿಣ ಅಮೆರಿಕಾದ ಹಲವು ಸಂರಕ್ಷಿತ ಪ್ರದೇಶಗಳನ್ನು ಪ್ರವೇಶಿಸಲು ಅನುಮತಿ ಪಡೆಯುವುದು ಮತ್ತು ವಾಣಿಜ್ಯೇತರ ಸಂಶೋಧನೆಗಾಗಿ ಜೈವಿಕ ಮಾದರಿಗಳನ್ನು ಸಂಗ್ರಹಿಸುವುದು ಪ್ರಯಾಸಕರವಾಗಿದೆ. ಇದು 'ಜಾಗತಿಕ ಜೀವವೈವಿಧ್ಯದ ಹಾಟ್ಸ್ಪಾಟ್' ಎನಿಸಿರುವ ಅಮೆಜಾನ್ ಮಳೆಕಾಡುಗಳು, ಪಶ್ಚಿಮಘಟ್ಟಗಳು ಮತ್ತು ಪೂರ್ವ ಹಿಮಾಲಯಗಳನ್ನೂ ಒಳಗೊಂಡಿದೆ.

ಜೀವವೈವಿಧ್ಯತೆಯ ಒಡಂಬಡಿಕೆಯ ಜವಾಬ್ದಾರಿಗಳನ್ನು ಅನುಸರಿಸಿ, ಭಾರತವು ೨೦೦೨ರಲ್ಲಿ ಜೀವವೈವಿಧ್ಯತೆಯ ಕಾಯಿದೆಯನ್ನು ಜಾರಿಗೆ ತಂದಿತು; ಜೀವವೈವಿಧ್ಯತೆಯ ಸಂರಕ್ಷಣೆಗಾಗಿ ೨೦೦೪ಲ್ಲಿ 'ಜೀವವೈವಿಧ್ಯತೆಯ ನಿಯಮ'ಗಳನ್ನು ಸೂಚಿಸಿತು. ಇದರ ಅಡಿಯಲ್ಲಿ ನಿಬಂಧನೆಗಳನ್ನು ಜಾರಿಗೆ ತರಲು, ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ ಮತ್ತು ರಾಜ್ಯ ಜೀವವೈವಿಧ್ಯ ಮಂಡಳಿಗಳನ್ನು ಸ್ಥಾಪಿಸಲಾಯಿತು. ಕಾನೂನಿನ ಅಡಿಯಲ್ಲಿರುವ ಈ ವಿಭಾಗಗಳು, ಜೈವಿಕ ಸಂಪನ್ಮೂಲಗಳ ವಾಣಿಜ್ಯ ಬಳಕೆಗೆ ಮಾತ್ರವಲ್ಲದೇ, ವಾಣಿಜ್ಯೇತರ ಸಂಶೋಧನೆ ಸಂಬಂಧಿತ ಚಟುವಟಿಕೆಗಳ ಮೇಲೂ ನಿರ್ಬಂಧಗಳನ್ನು ಹೇರುತ್ತಿವೆ.

ಭಾರತದಲ್ಲಿ, ರಾಷ್ಟ್ರೀಯ/ರಾಜ್ಯ ಜೀವವೈವಿಧ್ಯ ಮಂಡಳಿಗಳ ಅನುಮತಿಯಿಲ್ಲದೆ, ಜೈವಿಕ ಮಾದರಿಗಳನ್ನು ಸಂಗ್ರಹಿಸುವುದು, ಅಧ್ಯಯನ ಮಾಡುವುದು ಸಲ್ಲದು; ಅನುಮತಿಯಿಲ್ಲದೆ, ಇಲ್ಲಿ ನಡೆಸಿದ ಸಂಶೋಧನೆಯ ಫಲಿತಾಂಶಗಳನ್ನು ವಿದೇಶಿಗರಿಗೆ/ಅನಿವಾಸಿ ನಾಗರಿಕರಿಗೆ ವರ್ಗಾವಣೆ ಮಾಡುವಂತೆಯೂ ಇಲ್ಲ. ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಎಂಬುದು ಬಹಳವೇ ತೊಡಕುಳ್ಳ, ಸಮಯ ಬೇಡುವ ಪ್ರಕ್ರಿಯೆಯಾದ್ದರಿಂದ, ಇದು ಜ್ಞಾನದ ಪ್ರಗತಿ ಪ್ರಕ್ರಿಯೆಯನ್ನು ಕಡಿತಗೊಳಿಸುತ್ತದೆಯೆಂದೂ, ಸಂಶೋಧನೆಯ ಪ್ರಗತಿಗೆ ಅಗತ್ಯವಾದ ಅಂತರಾಷ್ಟ್ರೀಯ ಸಹಯೋಗಗಳನ್ನು ತಡೆಯುತ್ತದೆಯೆಂದೂ ಭಾರತದ ಅನೇಕ ಪರಿಸರವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಈ ನಿಯಮಾವಳಿಗಳು, ವೈಜ್ಞಾನಿಕ ಮಾಹಿತಿಯ ವಾಣಿಜ್ಯಿಕ ತಪ್ಪುಬಳಕೆಯನ್ನು ನಿವಾರಿಸುವ ಸಲುವಾಗಿ ಇದ್ದರೂ, ಜೀವವೈವಿಧ್ಯತೆಯ ಅರ್ಥೈಸಿಕೊಳ್ಳುವಿಕೆ ಹಾಗೂ ಸಂರಕ್ಷಣೆಯನ್ನು ಮಿತಿಗೊಳಿಸುತ್ತವೆ ಎಂದು ಲೇಖಕರು ವಾದಿಸುತ್ತಾರೆ.

ಲೇಖಕರು, ಈ ಸಮಸ್ಯೆಗೆ ಸುಲಭ ಪರಿಹಾರವನ್ನು ಸೂಚಿಸುತ್ತಾ, ಲಾಭದ ಉದ್ದೇಶವಿಲ್ಲದ, ಸಮಾಜಮುಖಿ ಸಂಶೋಧನೆಗಳನ್ನು ವಾಣಿಜ್ಯಿಕ ಉದ್ದೇಶದ ಸಂಶೋಧನೆಗಳಿಂದ ಪ್ರತ್ಯೇಕಿಸಿ, ಅನುಮತಿ ನೀಡುವಂತೆ ನಿಯಮಾವಳಿಯನ್ನು ರಚಿಸಬೇಕು ಎನ್ನುತ್ತಾರೆ. 'ಅಂತರರಾಷ್ಟ್ರೀಯ ಬೀಜ ಒಪ್ಪಂದ' ಎಂದೇ ಖ್ಯಾತವಾಗಿರುವ 'ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲ ಕುರಿತ ಅಂತಾರಾಷ್ಟ್ರೀಯ ಒಡಂಬಡಿಕೆ'ಯ ರೀತಿಯಲ್ಲೇ ಹೊಸ ಉಪನೀತಿಗಳನ್ನು ರಚಿಸಿ, ಜೀವವೈವಿಧ್ಯ ಸಂಶೋಧನೆ, ಸಂರಕ್ಷಣೆ ಮತ್ತು ಅಂತರರಾಷ್ಟ್ರೀಯ ಸಹಭಾಗಿತ್ವವನ್ನು ಉತ್ತೇಜಿಸಿ, ಸುಗಮಗೊಳಿಸಲು ಸ್ಪಷ್ಟವಾದ ಒಪ್ಪಂದವನ್ನು ಸದಸ್ಯ ರಾಷ್ಟ್ರಗಳು ಅನುಮೊದಿಸಬೇಕು ಎನ್ನುತ್ತಾರೆ ಸಹಲೇಖಕರಾದ ಡಾ.ಪಿ.ಧರ್ಮರಾಜನ್; ಇದು ಎಲ್ಲಾ ಜವಾಬ್ದಾರಿಯುತ ಸಂಶೋಧಕರ ಮನದ ಮಾತಿನ ಪ್ರತಿಧ್ವನಿ ಎನ್ನಬಹುದು.

Kannada

Recent Stories

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
ಸ್ಪರ್ಶರಹಿತ ಬೆರಳಚ್ಚು ಸಂವೇದಕದ ಪ್ರಾತಿನಿಧಿಕ ಚಿತ್ರ

ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಲೇಖಕರು
ಮೈಕ್ರೋಸಾಫ್ಟ್ ಡಿಸೈನರ್ ನ ಇಮೇಜ್ ಕ್ರಿಯೇಟರ್ ಬಳಸಿ ಚಿತ್ರ ರಚಿಸಲಾಗಿದೆ

ಐಐಟಿ ಬಾಂಬೆಯ ಸಂಶೋಧಕರು ಶಾಕ್‌ವೇವ್-ಆಧಾರಿತ ಸೂಜಿ-ಮುಕ್ತ ಸಿರಿಂಜ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಸೂಜಿಗಳಿಲ್ಲದೆ ಔಷಧಿಗಳನ್ನು ಪೂರೈಸುವ ಮಾರ್ಗವನ್ನು ಕಂಡುಹಿಡಿದಿದ್ದಾರೆ.

ಲೇಖಕರು
ಅತ್ಯಂತ ಪ್ರಾಚೀನ ವಸ್ತುವಿನ ಅಧ್ಯಯನ

ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಲೇಖಕರು
ಕಾಂಕ್ರೀಟ್‌ ಪರೀಕ್ಷೆಗೆ ಪ್ರೋಬ್‌

ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ.

ಲೇಖಕರು
‘ದ್ವಿಪಾತ್ರ’ದಲ್ಲಿ ಮೈಕ್ರೋ ಆರ್‌ಎನ್‌ಎ

ವೈರಲ್ ಸೋಂಕುಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳಲ್ಲಿ ಮೈಕ್ರೋ ಆರ್‌ಎನ್‌ಎ ‘ದ್ವಿಪಾತ್ರ’ದಲ್ಲಿ ಕೆಲಸ ಮಾಡುತ್ತದೆ. 

ಲೇಖಕರು
ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳು

ಐಐಟಿ ಬಾಂಬೆ ಯ ಬ್ಯಾಟರಿ ಪ್ರೋಟೋಟೈಪಿಂಗ್ ಲ್ಯಾಬ್ ನ ಸಂಶೋಧಕರು ಇಂಧನ (ಶಕ್ತಿ) ಶೇಖರಣಾ ಸಾಧನವಾಗಿರುವ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. 

Loading content ...
Loading content ...
Loading content ...
Loading content ...
Loading content ...