ಬೆಂಗಳೂರು
ವಲಸೆ ಬೇಕೇ ಬೇಡವೇ? - ಚಿಟ್ಟೆಗಳ ಮುಂದಿರುವ ಯಕ್ಷಪ್ರಶ್ನೆ!

ಸಂಶೋಧಕರು ಅಧ್ಯಯನ ಮಾಡಿದ ಚಿಟ್ಟೆಗಳಲ್ಲಿ ಒಂದಾದ ಲೆಮನ್ ಎಮಿಗ್ರೆಂಟ್ ಚಿಟ್ಟೆ (ಕ್ಯಾಟೊಪ್ಸಿಲಿಯಾ ಪೊಮೊನಾ) (ಚಿತ್ರ ಕೃಪೆ: ಪ್ರೊ. ಕೃಷ್ಣಮೇಘ್ ಕುಂಟೆ).

ಹಸಿರು ಹುಲ್ಲುಗಾವಲುಗಳ, ಹೆಚ್ಚು ಸಮೃದ್ಧವಾಗಿರುವ ಆವಾಸಸ್ಥಾನಗಳ ಹುಡುಕಾಟದಲ್ಲಿ ಪ್ರಾಣಿಪಕ್ಷಿಗಳು, ಕಡಿಮೆ ಅನುಕೂಲಕರ ವಾತಾವರಣವನ್ನು ತೊರೆದು ಹೊರಡುತ್ತವೆ. ಸೆರೆಂಗೆಟಿಯ ಮಹಾ ವಲಸೆ, ಚಳಿಗಾಲದಲ್ಲಿ ಉಷ್ಣವಲಯದ ಕಡೆಗೆ ಸಾಗುವ ಪಕ್ಷಿಗಳು ಮತ್ತು ಬೆಳೆಗಳನ್ನು ನುಂಗಿ ಸ್ವಾಹಾ ಮಾಡಲು ದಾಳಿಯಿಡುವ ಲಕ್ಷಾಂತರ ಮಿಡತೆಗಳ ಹಿಂಡು - ಇವೆಲ್ಲಾ ಅಂತಹ ಚಲನೆಗೆ ಕೆಲವು ಉದಾಹರಣೆಗಳು. ಪರಿಚಿತ ಸ್ಥಳಗಳಿಗೆ ವಲಸೆ ಹೋಗುವುದು ಸುಲಭ; ಆದರೆ, ಅಪರಿಚಿತ ಪ್ರದೇಶಗಳಿಗೆ ದಾಂಗುಡಿ ಇಟ್ಟು, ನೆಲೆಗೊಳ್ಳುವುದು ಸವಾಲೇ ಸರಿ. ವಿಕಾಸದ ಹಾದಿಯಲ್ಲಿ, ಪ್ರಾಣಿಪಕ್ಷಿಕೀಟಗಳ ನಡವಳಿಕೆ ಮತ್ತು ಬದುಕುಳಿಯುವ ಸಾಧ್ಯತೆಗಳು, ಇಂತಹ ಸವಾಲುಗಳೊಂದಿಗೆ ಜೂಜುವುದರ ಮೂಲಕವೇ ರೂಪುಗೊಳ್ಳುತ್ತದೆ. ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ ಮತ್ತು ಸಾಸ್ತ್ರಾ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಹೊಸ ಅಧ್ಯಯನವೊಂದರಲ್ಲಿ,  ಚಿಟ್ಟೆಗಳ ವಲಸೆಯ ಪ್ರಕ್ರಿಯೆಯಲ್ಲಿ ಇಂತಹ ಯಾವ ವಹಿವಾಟು ನಡೆಯುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ.

ಬಯೋಲೊಜಿ ಲೆಟರ್ಸ್’ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಈ ಅಧ್ಯಯನವು, ಚಿಟ್ಟೆಗಳು ತಮ್ಮ ಶಕ್ತಿಯನ್ನು ರೆಕ್ಕೆಗಳಲ್ಲಿ ಬಲವಾದ ಸ್ನಾಯುಗಳನ್ನು ನಿರ್ಮಿಸುವ ಕಡೆಗೆ ಅಥವಾ ಸಂತಾನೋತ್ಪತ್ತಿಯ ಕಡೆಗೆ - ಇವೆರಡರ ನಡುವೆ ಯಾವುದರಲ್ಲಿ ಹೂಡಿಕೆ ಮಾಡುತ್ತವೆ ಎಂಬುದನ್ನು ಪರಿಶೀಲಿಸುತ್ತದೆ. ಸೂಕ್ತವಾದ ಆವಾಸಸ್ಥಾನಗಳನ್ನು ಹುಡುಕಲು ಚಿಟ್ಟೆಗಳು ಹೆಚ್ಚು ದೂರ ಚಲಿಸಬೇಕಾಗುತ್ತದೆ ಮತ್ತು ಅದಕ್ಕೆ ಬಲವಾದ ಸ್ನಾಯುಗಳು ಬೇಕಾಗುತ್ತವೆ. ಆದರೆ, ಚಿಟ್ಟೆಗಳು ಮೊಟ್ಟೆಗಳನ್ನು ಇಡಲು ಮತ್ತು ಯಶಸ್ವಿಯಾಗಿ ಸಂತಾನೋತ್ಪತ್ತಿ ಮಾಡಲು ಸಾಧ್ಯವಾಗದಿದ್ದರೆ, ಸೂಕ್ತವಾದ ಆವಾಸಸ್ಥಾನಗಳು ದೊರೆತರೂ ಉಪಯೋಗವಿಲ್ಲ ಅಲ್ಲವೇ? ವೈಜ್ಞಾನಿಕ ಸಂಶೋಧನಾ ಮಂಡಳಿ (ಸಿಎಸ್ಐಆರ್) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ) ಯಿಂದ ಅನುದಾನ ಪಡೆದ ಈ ಅಧ್ಯಯನವು, ವಿವಿಧ ಜಾತಿಯ ಚಿಟ್ಟೆಗಳು ಈ ಎರಡು ಆಯ್ಕೆಗಳಲ್ಲಿ ಯಾವುದರ ಬಗ್ಗೆ ಹೆಚ್ಚು ಒಲವು ತೋರುತ್ತವೆ ಎಂಬುದನ್ನು ಪರಿಶೋಧಿಸುತ್ತದೆ.

ಪ್ರಾಣಿಗಳಲ್ಲಿ ವಲಸೆ ಎಂಬುದು ತುಂಬಾ ಸಾಮಾನ್ಯ.

"ಸಾಮಾನ್ಯವಾಗಿ, ಹಗಲಿನ ವ್ಯಾಪ್ತಿ ಮತ್ತು ತಾಪಮಾನದಂತಹ ಮುನ್ಸೂಚನೆ ದೊರೆಯಬಲ್ಲ ಹವಾಮಾನ ಅಂಶಗಳ ಆಧಾರದ ಮೇಲೆ, ವಲಸೆಗಳ ಬಗ್ಗೆ ನಿರ್ಧರಿಸಲಾಗುತ್ತದೆ. ಚಿಟ್ಟೆಗಳಲ್ಲಿ ಕಂಡುಬರುವಂತೆ, ಸಾಮಾನ್ಯ ವಲಸೆ ಮತ್ತು 'ಫ್ಯಾಕಲ್ಟೇಟಿವ್' ವಲಸೆ ಅಂದರೆ ಸಂದರ್ಭಕ್ಕೆ ತಕ್ಕಂತೆ ಕೆಲವೊಮ್ಮೆ ಮಾತ್ರ ನಡೆಯುವ ವಲಸೆಗಳು ಹೆಚ್ಚು ಸ್ವಾಭಾವಿಕವಾಗಬಹುದು ಮತ್ತು ಸ್ಥಳೀಯ ಅತಿಥೇಯ ಸಸ್ಯಗಳ ಪ್ರಮಾಣ ಅಥವಾ ಗುಣಮಟ್ಟದಲ್ಲಿನ ಕುಸಿತದಿಂದ ಇದು ಉಂಟಾಗಬಹುದು ”ಎಂದು ಈ ಅಧ್ಯಯನದ ಪ್ರಮುಖ ಲೇಖಕರಾದ ಎಂ.ಎಸ್.ವೈಶಾಲಿ ಭೌಮಿಕ್ ವಿವರಿಸುತ್ತಾರೆ.

ಚಿಟ್ಟೆಗಳು ಕಂಬಳಿಹುಳುಗಳಾಗಿದ್ದಾಗ, ನಿರ್ದಿಷ್ಟ ಸಸ್ಯಗಳ ಎಲೆಗಳನ್ನು ಅವಲಂಬಿಸಿರುತ್ತವೆ; ಆ ಸಸ್ಯಗಳನ್ನು  ಅವುಗಳ ‘ಅತಿಥೇಯ ಸಸ್ಯಗಳು’ ಎಂದು ಕರೆಯಲಾಗುತ್ತದೆ. ವಿಭಿನ್ನ ಚಿಟ್ಟೆ ಪ್ರಭೇದಗಳು ವಿಭಿನ್ನ ಅತಿಥೇಯ ಸಸ್ಯಗಳನ್ನು ಹೊಂದಿರುತ್ತವೆ. ಋತುಮಾನಕ್ಕೆ ತಕ್ಕಂತೆ ವಿವಿಧ ಸಸ್ಯಗಳು ವಿವಿಧ ಸಮಯದಲ್ಲಿ ಚಿಗುರೊಡೆಯುತ್ತವೆ. ಆದ್ದರಿಂದ, ಮರಿಹುಳುಗಳಿಗೆ ತಾಜಾ ಎಲೆಗಳ ಸಂಗ್ರಹವು ಅಮೂಲ್ಯ ಮತ್ತು ಸೀಮಿತ ಸಂಪನ್ಮೂಲವಾಗಿದೆ. ಹಾಗಾಗಿ, ಹೆಣ್ಣು ಚಿಟ್ಟೆಯು ತನ್ನ ಮೊಟ್ಟೆಗಳನ್ನು ಎಲ್ಲಿ ಇಡಬೇಕು  ಎಂಬುದನ್ನು ಎಚ್ಚರಿಕೆಯಿಂದ ಆರಿಸಬೇಕಾಗುತ್ತದೆ; ಈ ಎಚ್ಚರಿಕೆಯನ್ನು ವಹಿಸುವುದರಿಂದ ಆಕೆಯ ಸಂತತಿಯು ಬದುಕುಳಿಯಲು ಉತ್ತಮ ಅವಕಾಶ ದೊರೆಯಬಹುದಾಗಿದೆ. ಅವಳ ಸುತ್ತಮುತ್ತಲಿನ ಚಿಗುರೆಲೆಗಳು ಉತ್ತಮ ಗುಣಮಟ್ಟದ್ದಾಗಿರದಿದ್ದರೆ, ಅವಳು ಮೊಟ್ಟೆಗಳನ್ನು ಇಡಲು ಹೊಸ ಸ್ಥಳಕ್ಕೆ ತೆರಳಲೇಬೇಕಾಗುತ್ತದೆ.

ಸಂಶೋಧಕರು ಅಧ್ಯಯನ ನಡೆಸಿದ ಚಿಟ್ಟೆಗಳಲ್ಲಿ ಒಂದಾದ ಮೊಟಲ್ಡ್ ಎಮಿಗ್ರೆಂಟ್ ಚಿಟ್ಟೆ (ಕ್ಯಾಟೊಪ್ಸಿಲಿಯಾ ಪೈರಾಂಥೆ) (ಚಿತ್ರ ಕೃಪೆ: ಪ್ರೊ. ಕೃಷ್ಣಮೇಘ್ ಕುಂಟೆ)

ಕೆಲವು ಚಿಟ್ಟೆಗಳು ‘ಸಂತಾನೋತ್ಪತ್ತಿ ಡಯಾಪಾಸ್’ ಸ್ಥಿತಿಗೆ ಹೋಗುತ್ತವೆ; ಆ ಸ್ಥಿತಿಯಲ್ಲಿ ಅವು ಸಕ್ರಿಯವಾಗಿಯೇನೋ ಇರುತ್ತವೆ, ಆದರೆ ಅವು ಅನುಕೂಲಕರ ಸ್ಥಳವನ್ನು ತಲುಪುವವರೆಗೆ ಆಹಾರ ಸೇವನೆ ಮತ್ತು ಸಂತಾನೋತ್ಪತ್ತಿಯನ್ನು ಮಾತ್ರ ನಡೆಸುವುದಿಲ್ಲ.

"ಡಯಾಪಾಸ್ ಎನ್ನುವುದು, ಕೀಟಗಳು ತಮ್ಮ ಚಯಾಪಚಯ ಕ್ರಿಯೆಯನ್ನು ಕಡಿಮೆಗೊಳಿಸಿದಾಗ ಮತ್ತು ಅಳೆಯಬಹುದಾದ ಬೆಳವಣಿಗೆಯನ್ನು ನಿಲ್ಲಿಸಿದಾಗಿನ ಶರೀರವೈಜ್ಞಾನಿಕ ವಿರಾಮದ ಸ್ಥಿತಿಯಾಗಿದೆ. ಇದನ್ನು ಕೀಟಲೋಕದಾದ್ಯಂತ ಬಹಳ ಸಾಮಾನ್ಯವಾಗಿ ಕಾಣಬಹುದಾಗಿದೆ. ಮೊಟ್ಟೆಗಳು, ಮರಿಹುಳುಗಳು, ಪೊರೆಹುಳುಗಳು ಮತ್ತು ವಯಸ್ಕಕೀಟಗಳು - ಹೀಗೆ  ತಮ್ಮ ಪ್ರಭೇದಕ್ಕೆ ತಕ್ಕ ಹಾಗೆ ಈ ಯಾವುದೇ ಹಂತಗಳಲ್ಲಿ ಡಯಾಪಾಸ್ ಅನ್ನು ಪ್ರವೇಶಿಸಬಹುದು. ಚಿಟ್ಟೆಗಳ ಕೆಲವು ಗುಂಪುಗಳಲ್ಲಿ, ಸಂತಾನೋತ್ಪತ್ತಿ ಡಯಾಪಾಸ್ ಸಾಮಾನ್ಯವಾಗಿ ಕಂಡುಬರುತ್ತದೆ."

ಪಕ್ಷಿಗಳು ಅಥವಾ ಸಸ್ತನಿಗಳು ಸಂತಾನೋತ್ಪತ್ತಿ ಪ್ರಾರಂಭವಾಗುವ ಮೊದಲು ಅಥವಾ ಜನ್ಮ ನೀಡಿದ ನಂತರ ವಲಸೆ ಹೊರಡುತ್ತವೆ; ಆದರೆ, ಕೆಲವು ಚಿಟ್ಟೆಗಳು ಮೊಟ್ಟೆಗಳನ್ನು ಹೊತ್ತಿರುವಾಗಲೇ ವಲಸೆ ಹೊರಡಬೇಕಾಗುತ್ತದೆ. ಆದ್ದರಿಂದ, ಬಲವಾದ ರೆಕ್ಕೆಗಳ ನಿರ್ಮಾಣ ಅಥವಾ ಬಲವಾದ ಸಂತಾನೋತ್ಪತ್ತಕ ಅಂಗಾಂಶಗಳ ನಿರ್ಮಾಣ - ಇವುಗಳ ನಡುವೆ ಸಂಪನ್ಮೂಲಗಳನ್ನು, ಅಂದರೆ, ಕೊಬ್ಬಿನಂಶ ಮತ್ತು ಶರ್ಕರಪಿಷ್ಟಗಳನ್ನು ಹೇಗೆ ವಿಂಗಡಿಸಿಕೊಳ್ಳಬೇಕು ಎಂಬುದನ್ನು ಅವು ನಿರ್ಧರಿಸಬೇಕಾಗುತ್ತದೆ. ಇತರ ಪರಿಸ್ಥಿತಿಗಳು ಅನುಕೂಲಕರವಾಗಿದ್ದರೂ, ಇಲ್ಲದಿದ್ದರೂ ‘ಸಂತಾನೋತ್ಪತ್ತಿ  ಡಯಾಪಾಸ್‌’ ಎಂಬ ವಿರಾಮದ ಹಂತದ ಸಹಾಯದಿಂದ, ಚಿಟ್ಟೆಯು ಮೊಟ್ಟೆಗಳನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಎಷ್ಟು ಸಂಪನ್ಮೂಲಗಳು ಬೇಕೋ ಅದನ್ನು ಸುಲಭವಾಗಿ ನಿಭಾಯಿಸಬಹುದಾಗಿದೆ.

ಈ ಅಧ್ಯಯನದಲ್ಲಿ, ಗಂಡು ಮತ್ತು ಹೆಣ್ಣು ಚಿಟ್ಟೆಗಳು, ತಾವು ವಲಸೆ ಹೋಗುವ ಪ್ರಭೇದವೇ ಅಥವಾ ತಾವು ಡಯಾಪಾಸ್ ವಿರಾಮದ ಹಂತವನ್ನು ಬಳಸಿಕೊಳ್ಳುವ ಪ್ರಭೇದವೇ ಎಂಬುದರ ಆಧಾರದ ಮೇಲೆ, ತಮ್ಮ ಸಂತಾನೋತ್ಪತ್ತಕ ಅಂಗಾಂಶಗಳನ್ನು ಮತ್ತು ರೆಕ್ಕೆಯ ಸ್ನಾಯುಗಳನ್ನು ಹೇಗೆ ಅಭಿವೃದ್ಧಿಪಡಿಸಿಕೊಳ್ಳುತ್ತವೆ ಎಂಬುದನ್ನು ಸಂಶೋಧಕರು ಗಮನಿಸಿದ್ದಾರೆ. ಅವರು ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಹತ್ತು ಜಾತಿಯ ಚಿಟ್ಟೆಗಳನ್ನು ಅಧ್ಯಯನ ಮಾಡಿದರು. ಅವುಗಳಲ್ಲಿ ಎರಡು ಪ್ರಭೇದಗಳು (ಕ್ಯಾಟೊಪ್ಸಿಲಿಯಾ ಪೊಮೊನಾ ಮತ್ತು ಕ್ಯಾಟೊಪ್ಸಿಲಿಯಾ ಪೈರಾಂಥೆ) ವಲಸೆ ಹೋಗುತ್ತವೆ ಆದರೆ ಡಯಾಪಾಸ್‌ಗೆ ಒಳಗಾಗುವುದಿಲ್ಲ. ತಮ್ಮ ನಡುವೆ ನಿಕಟ ಸಂಬಂಧ ಹೊಂದಿರುವ ಇನ್ನುಳಿದ ಐದು ಪ್ರಭೇದಗಳು ವಲಸೆಯೇ ಹೋಗುವುದಿಲ್ಲ (ಕೊಲಿಯಾಸ್, ಯುರೆಮಾ, ಲೆಪ್ಟೋಸಿಯಾ, ಇಕ್ಸಿಯಾಸ್ ಮತ್ತು ಹೆಬೊಮೊಯಿಯಾ). ಮತ್ತೆರಡು ಮಿಲ್ಕ್ವೀಡ್ ಚಿಟ್ಟೆಗಳು (ಯುಪ್ಲೋಯಾ ಸಿಲ್ವೆಸ್ಟರ್ ಮತ್ತು ತಿರುಮಲಾ ಸೆಪ್ಟೆಂಟ್ರಿಯೊನಿಸ್) ಸಂತಾನೋತ್ಪತ್ತಿ ಡಯಾಪಾಸ್ ಸ್ಥಿತಿಯಲ್ಲಿಯೇ ವಲಸೆ ಹೋಗುತ್ತವೆ ಎಂದು ಕಂಡುಬಂದಿದೆ.

ಸಂಶೋಧಕರು, ಈ ಹತ್ತು ಜಾತಿಯ ಚಿಟ್ಟೆಗಳು ತಮಗೆ ದೊರೆತ ಸಂಪನ್ಮೂಲಗಳನ್ನು ಹೇಗೆ ಬಳಸಿದ್ದಾವೆಂದು ಅರಿಯಲು, ಅವುಗಳ ದೇಹದ ವಿವಿಧ ಭಾಗಗಳನ್ನು ಅಳೆದು ನೋಡಿದರು. ಹಾರಾಟಕ್ಕೆ ಬೇಕಾದ ಸ್ನಾಯುಗಳಲ್ಲಿನ ಸಂಪನ್ಮೂಲ ಹೂಡಿಕೆಯ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವ ಸಲುವಾಗಿ, ಅವರು ಎದೆಗೂಡಿನ ಅಥವಾ ಎದೆಯ ಮತ್ತು ಹೊಟ್ಟೆಯ ಗಾತ್ರದ ಅನುಪಾತವನ್ನು ಅಳೆದರು. ಜೊತೆಗೆ, ಅವುಗಳ ಹೊಟ್ಟೆಯಲ್ಲಿನ ಮೊಟ್ಟೆಗಳ ಸಂಖ್ಯೆಯನ್ನೂ ಸಹ ಲೆಕ್ಕಮಾಡಿದರು; ಇದು ಸಂತಾನೋತ್ಪತ್ತಿಗಾಗಿ ಆ ಚಿಟ್ಟೆಗಳು ಹೂಡಿಕೆ ಮಾಡಿದ ಸಂಪನ್ಮೂಲಗಳ ಪ್ರಮಾಣದ ಬಗ್ಗೆ ಸುಳಿವು ನೀಡುತ್ತದೆ.

ಈ ಎಲ್ಲಾ ಜಾತಿಯ ಚಿಟ್ಟೆಗಳಲ್ಲೂ, ಹೆಣ್ಣು ಚಿಟ್ಟೆಗಳು ಗಂಡು ಚಿಟ್ಟೆಗಳಿಗಿಂತಾ ಹೆಚ್ಚಾಗಿ ಸಂತಾನೋತ್ಪತ್ತಕ ಅಂಗಾಂಶಗಳಲ್ಲಿ ಸಂಪನ್ಮೂಲದ ಹೂಡಿಕೆ ಮಾಡುತ್ತವೆ ಎಂದು ಈ  ಅಧ್ಯಯನವು ಕಂಡುಕೊಂಡಿದೆ. ವಲಸೆ ಹೋಗುವ ಜಾತಿಯ ಹೆಣ್ಣುಚಿಟ್ಟೆಗಳು, ವಲಸೆ ಹೋಗದ ಜಾತಿಯ ಹೆಣ್ಣುಚಿಟ್ಟೆಗಳಿಗಿಂತಾ ಹೆಚ್ಚು ಮೊಟ್ಟೆಗಳನ್ನು ಉತ್ಪಾದಿಸಲು, ಹೆಚ್ಚು ಸಂಪನ್ಮೂಲವನ್ನು ಖರ್ಚು ಮಾಡುತ್ತವೆ ಎಂದು ಕೂಡ ಕಂಡುಬಂದಿದೆ. ಇದಕ್ಕೆ ತದ್ವಿರುದ್ಧವಾಗಿ, ಇಲ್ಲಿ ಅಧ್ಯಯನ ನಡೆಸಲಾದ ಎಲ್ಲಾ ಜಾತಿಗಳ ಗಂಡು ಚಿಟ್ಟೆಗಳೂ, ತಾವು ವಲಸಿಗ ಅಥವಾ ವಲಸಿಗವಲ್ಲದ ಸಮುದಾಯಕ್ಕೆ ಸೇರಿದ್ದರೂ ಲೆಕ್ಕಿಸದೇ,  ತಮ್ಮ ಸಂಪನ್ಮೂಲಗಳನ್ನು ಹಾರಾಟಕ್ಕೆ ಬೇಕಾದ ಸ್ನಾಯುಗಳನ್ನು ಬಲಪಡಿಸಿಕೊಳ್ಳಲು ಹೂಡಿಕೆ ಮಾಡಿದವು ಎಂಬುದು ಗಮನಕ್ಕೆ ಬಂದಿದೆ.

ಆದಾಗ್ಯೂ, ವಿವಿಧ ಪ್ರಭೇದಗಳ ಹೆಣ್ಣು ಚಿಟ್ಟೆಗಳಲ್ಲಿ, ವಲಸೆ ಹೋಗುವ ಮತ್ತು ಸಂತಾನೋತ್ಪತ್ತಿ ಡಯಾಪಾಸ್‌ಗೆ ಹೋಗುವ ಅವುಗಳ ಸಾಮರ್ಥ್ಯದ ಆಧಾರದ ಮೇಲೆ, ತಮ್ಮ ದೇಹದಲ್ಲಿ ಸಂಪನ್ಮೂಲಗಳನ್ನು ಹೇಗೆ ಹೂಡಿಕೆ ಮಾಡಿದರೆ ಒಳಿತು ಎಂಬುದು ನಿರ್ದೇಶಿತವಾಗಿದೆ ಎಂದು ಕಂಡುಬಂದಿದೆ.  ಅಂದರೆ, ಹಾರಾಟಕ್ಕೆ ಬೇಕಾದ ಸ್ನಾಯುಗಳಲ್ಲಿ ಹೆಚ್ಚಿನ ಸಂಪನ್ಮೂಲಗಳನ್ನು ಹೂಡಿಕೆ ಮಾಡಿದ ‘ಕ್ಯಾಟೋಸ್ಪಿಲ್ಲಾ’ ಜಾತಿಯ ಹೆಣ್ಣು ಚಿಟ್ಟೆಗಳು ಇತರ ಹೆಣ್ಣುಚಿಟ್ಟೆಗಳಿಗಿಂತಾ ಕಡಿಮೆ ಮೊಟ್ಟೆಗಳನ್ನು ಹೊಂದಿರುತ್ತವೆ.

ಕೆಲವು ಪ್ರಭೇದಗಳ ಅತಿಥೇಯ ಸಸ್ಯಗಳು ಮತ್ತು ಅನುಕೂಲಕರ ಆವಾಸಸ್ಥಾನಗಳು ನಾಶವಾಗುತ್ತಿರುವ ನಗರೀಕೃತ ಜಗತ್ತಿನಲ್ಲಿ, ಚಿಟ್ಟೆಯ ವಲಸೆಯನ್ನು, ಪ್ರಸರಣವನ್ನು ನಿರ್ದೇಶಿಸುವ ಅಂಶಗಳ ಮೇಲೆ ಈ ಸಂಶೋಧನೆಯು ಬೆಳಕು ಚೆಲ್ಲುತ್ತದೆ. ಆವಾಸಸ್ಥಾನವನ್ನೇ ಕಳೆದುಕೊಳ್ಳುತ್ತಿರುವ ಚಿಟ್ಟೆಗಳು ಬದುಕುಳಿಯುವ ಉತ್ತಮ ಅವಕಾಶಕ್ಕಾಗಿ ಹೇಗೆ ಸ್ಪರ್ಧಿಸುತ್ತವೆ?

"ಕ್ಯಾಟೊಪ್ಸಿಲಿಯಾದಂತಹ ಕಾಸ್ಮೋಪಾಲಿಟನ್ ಪ್ರಭೇದಗಳು ನಗರ ಆವಾಸಸ್ಥಾನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದು; ಏಕೆಂದರೆ ಅವುಗಳ ಅತಿಥೇಯ ಸಸ್ಯಗಳು ಹೆಚ್ಚು ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ ಅಲ್ಲಲ್ಲಿ ಚದುರಿದಂತೆ ಇರುವ ಆವಾಸಸ್ಥಾನಗಳು, ವಲಸಿಗ ಪ್ರಭೇದಗಳಿಗೆ ಹೆಚ್ಚಿನ ಅಪಾಯವನ್ನುಂಟುಮಾಡುತ್ತವೆ. ಛಿದ್ರಗೊಂಡ ಅಥವಾ ಚದುರಿದಂತೆ ಇರುವ ಆವಾಸಸ್ಥಾನಗಳಾದ್ಯಂತ ಸಂಚರಿಸುವಾಗ, ವಲಸೆಯ ಸಮಯದಲ್ಲಿ ‘ಸಂತಾನೋತ್ಪತ್ತಿ ಡಯಾಪಾಸ್‌’ಅನ್ನು ಪ್ರವೇಶಿಸುವ ಪ್ರಭೇದಗಳು ಮಾತ್ರ ಉತ್ತಮವಾಗಿ ಬದುಕುಳಿಯುತ್ತವೆ ಎಂದು ಕಂಡುಬಂದಿದೆ. ಆದರೆ ಅರಣ್ಯನಾಶ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಅವುಗಳ ಅತಿಥೇಯ ನೆಲೆಯಲ್ಲಿ ನಷ್ಟವಾಗುವುದರಿಂದ, ಹೆಚ್ಚಿನ ಅಪಾಯವನ್ನು ಎದುರಿಸಲೇಬೇಕಾಗುತ್ತದೆ ”ಎಂದು ಭೌಮಿಕ್ ವಿವರಿಸುತ್ತಾರೆ.

ಪ್ರತಿ ವರ್ಷವೂ, ದಕ್ಷಿಣ ಭಾರತದಲ್ಲಿ ಮಳೆಗಾಲದ ಪ್ರಾರಂಭದೊಂದಿಗೆ, ಸಾವಿರಾರು ಚಿಟ್ಟೆಗಳು ವಲಸೆ ಹೊರಡುತ್ತವೆ; ಹೀಗೆ ವಲಸೆ ಹೊರಟ ಅವು, ಕೇವಲ ಹುಟ್ಟುವ ಕಂದಮ್ಮಗಳಿಗಾಗಿ ಹಸಿರು ಹುಲ್ಲುಗಾವಲುಗಳನ್ನು, ಚಿಗುರೆಲೆಯ ಭರಪೂರ ಭೋಜನವನ್ನು ಮಾತ್ರ ಹುಡುಕಿ ಹೊರಟದ್ದಲ್ಲ; ತಮ್ಮ ಮುಂದಿನ ಜನಾಂಗದ ಭವ್ಯ ಭವಿತವ್ಯವನ್ನೂ ಖಾತ್ರಿ ಪಡಿಸುವ ಜವಾಬ್ದಾರಿಯನ್ನೂ ಪೂರೈಸಲು ಹೊರಟಿರುತ್ತವೆ ಎಂಬುದು ಚೆಂದದ ವೈಜ್ಞಾನಿಕ ಸತ್ಯ!

Kannada

Recent Stories

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
ಸ್ಪರ್ಶರಹಿತ ಬೆರಳಚ್ಚು ಸಂವೇದಕದ ಪ್ರಾತಿನಿಧಿಕ ಚಿತ್ರ

ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಲೇಖಕರು
ಮೈಕ್ರೋಸಾಫ್ಟ್ ಡಿಸೈನರ್ ನ ಇಮೇಜ್ ಕ್ರಿಯೇಟರ್ ಬಳಸಿ ಚಿತ್ರ ರಚಿಸಲಾಗಿದೆ

ಐಐಟಿ ಬಾಂಬೆಯ ಸಂಶೋಧಕರು ಶಾಕ್‌ವೇವ್-ಆಧಾರಿತ ಸೂಜಿ-ಮುಕ್ತ ಸಿರಿಂಜ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಸೂಜಿಗಳಿಲ್ಲದೆ ಔಷಧಿಗಳನ್ನು ಪೂರೈಸುವ ಮಾರ್ಗವನ್ನು ಕಂಡುಹಿಡಿದಿದ್ದಾರೆ.

ಲೇಖಕರು
ಅತ್ಯಂತ ಪ್ರಾಚೀನ ವಸ್ತುವಿನ ಅಧ್ಯಯನ

ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಲೇಖಕರು
ಕಾಂಕ್ರೀಟ್‌ ಪರೀಕ್ಷೆಗೆ ಪ್ರೋಬ್‌

ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ.

ಲೇಖಕರು
‘ದ್ವಿಪಾತ್ರ’ದಲ್ಲಿ ಮೈಕ್ರೋ ಆರ್‌ಎನ್‌ಎ

ವೈರಲ್ ಸೋಂಕುಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳಲ್ಲಿ ಮೈಕ್ರೋ ಆರ್‌ಎನ್‌ಎ ‘ದ್ವಿಪಾತ್ರ’ದಲ್ಲಿ ಕೆಲಸ ಮಾಡುತ್ತದೆ. 

ಲೇಖಕರು
ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳು

ಐಐಟಿ ಬಾಂಬೆ ಯ ಬ್ಯಾಟರಿ ಪ್ರೋಟೋಟೈಪಿಂಗ್ ಲ್ಯಾಬ್ ನ ಸಂಶೋಧಕರು ಇಂಧನ (ಶಕ್ತಿ) ಶೇಖರಣಾ ಸಾಧನವಾಗಿರುವ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. 

Loading content ...
Loading content ...
Loading content ...
Loading content ...
Loading content ...