ಬೆಂಗಳೂರು

ಹೆನ್ರಿ ಸುವಿಲ್ಲನ್ ಥಾಮಸ್ 1873 ರಲ್ಲಿ ಪ್ರಕಟವಾದ ತಮ್ಮ ‘ಎ ರಾಡ್ ಇನ್ ಇಂಡಿಯಾ’ ಎಂಬ ಪುಸ್ತಕದಲ್ಲಿ ಭಾರತೀಯ ಕ್ರೀಡಾ ಮೀನುಗಾರಿಕೆಯ ಹಲವು ಆಯಾಮಗಳನ್ನು, ಅದರ ತಂತ್ರೋಪಾಯಗಳನ್ನು ಉಲ್ಲೇಖಿಸುತ್ತಾರೆ. ಈ ಪುಸ್ತಕದಲ್ಲಿ ಮೋಜಿನ ಆಟಕ್ಕಾಗಿ ಬಳಸುವ ‘ಗೂನು ಬೆನ್ನಿನ ಮಹಶೀರ್ (ಸಿಹಿ ನೀರಿನ)’ ಮೀನಿನ ಬಗ್ಗೆ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ. ಈ ಮೀನು ಸುಮಾರು 1.5 ಮೀಟರ್ ಉದ್ದ ಹಾಗೂ 55 ಕಿಲೊ ಗ್ರಾಮ್ ತೂಕದಷ್ಟು ದೈತ್ಯಾಕಾರವಾಗಿ ಬೆಳೆಯಬಹುದು. ದಕ್ಷಿಣ ಭಾರತದ ದೇಶೀಯ ಮೀನಾಗಿರುವ ಇದು, ಜಗತ್ತಿನ ಎಲ್ಲಾ ಮೀನುಗಾರರಿಗೂ ‘ದೈತ್ಯ, ಕಠಿಣ ಹೋರಾಟ ಮನೋಭಾವದ ಹಾಗೂ ಅತ್ಯಂತ ಪ್ರಮುಖ ಆಟದ ಮೀನು’ ಎಂದೇ ಪರಿಚಿತ. ಆದರೆ ವಿಪರ್ಯಾಸದ ಸಂಗತಿಯೇನು ಗೊತ್ತೇ? ಸುಮಾರು ನೂರೈವತ್ತು ವರ್ಷಗಳಿಂದ ಈ ಮೀನಿನ ತಳಿಯ ಬಗ್ಗೆ ಮಿತವಾಗಿ ತಿಳಿದಿದ್ದರೂ, ಅದರ ಬಗೆಗಿನ  ಅರಿವು ತುಂಬಾ ಸೀಮಿತವಾಗಿತ್ತು, ಈ ಮೀನಿಗೆ ವೈಜ್ಞಾನಿಕ ಹೆಸರನ್ನು ಕೂಡ ನೀಡಲಾಗಿರಲಿಲ್ಲ.

ಈ ವಿಷಯದಲ್ಲಿ ನಾವು ಇಂಗ್ಲೆಂಡಿನ ಬೌರ್ನಮೌತ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಸಂಶೋಧನೆಗೆ ಧನ್ಯವಾದ ತಿಳಿಸಲೇಬೇಕು. ಈ ಕ್ರೀಡಾ ಮೀನು ಕಾವೇರಿ ನದಿ ಹಾಗೂ ಅದರ ಉಪನದಿಗಳ ಸ್ಥಳೀಯ ಮೀನಾಗಿದ್ದು, ನೈಸರ್ಗಿಕ ಒತ್ತಡ ಹಾಗೂ ಜಲ ವಿತರಣಾ ನಿರ್ಬಂಧಗಳ ಕಾರಣದಿಂದ ಇಂದು ವಿನಾಶದ ಅಂಚಿಗೆ ಬಂದು ನಿಂತಿರುವುದು ನಿಜಕ್ಕೂ ವಿಷಾದದ ಸಂಗತಿ. ಇತ್ತೀಚಿನ ಅಧ್ಯಯನದಲ್ಲಿ ವಿಜ್ಞಾನಿಗಳು ಈ ಮತ್ಸ್ಯಜೀವಕ್ಕೆ ‘ಟಾರ್ ರೆಮಾದೇವಿ’ ಎಂಬ ವೈಜ್ಞಾನಿಕ ಹೆಸರನ್ನಿಟ್ಟಿದ್ದಾರೆ. 

“ಇಂತಹ ಅದ್ಭುತವಾದ ಜಗತ್ಪ್ರಸಿದ್ಧ ಜೀವಿಯೊಂದು ವೈಜ್ಞಾನಿಕ ಹೆಸರನ್ನು ಪಡೆಯುವ ಮೊದಲೇ ಅಳಿವಿನಂಚಿಗೆ ಬಂದು ನಿಂತಿರುವುದು, ನಿಜವಾಗಿಯೂ ನಂಬಲಾಗದ ಸಂಗತಿ” ಎನ್ನುತ್ತಾರೆ ಬೌರ್ನಮೌತ್ ವಿಶ್ವವಿದ್ಯಾಲಯದ ಮುಖ್ಯ ವಿಜ್ಞಾನಿ ಆಡ್ರಿಯನ್ ಪಿಂಡರ್. ಇವರು  ಮಹಶೀರ್ ತಳಿಯ ರಕ್ಷಣೆಗಾಗಿ ಸ್ಥಾಪಿಸಲಾಗಿರುವ ಮಹಶೀರ್ ಟ್ರಸ್ಟ್ನ ನಿರ್ದೇಶಕರು ಕೂಡ ಹೌದು.

ಎಲ್ಲವೂ ಸರಿ, ಆದರೆ ಹೆಸರಲ್ಲೇನಿದೆ? ಎಂದು ನೀವು ಪ್ರಶ್ನಿಸಬಹುದು. ವೈಜ್ಞಾನಿಕ ಹೆಸರಿಲ್ಲದಿರುವ ಕಾರಣಕ್ಕಾಗಿಯೇ ‘ಗೂನು ಬೆನ್ನಿನ ಮಹಶೀರ್’ ಮೀನನ್ನು ಐ.ಯು.ಸಿ.ಎನ್. ಸಂಸ್ಥೆ ತನ್ನ ‘ಅಳಿವಿನಂಚಿನಲ್ಲಿರುವ ತಳಿ’ಗಳ ಪಟ್ಟಿಯಲ್ಲಿ ಸೇರಿಸಿಕೊಂಡಿರಲಿಲ್ಲ. ಈ ಪಟ್ಟಿಯು ಜಗತ್ತಿನ ಎಲ್ಲ ಅಳಿವಿನಂಚಿನ ಸಸ್ಯರಾಶಿ ಹಾಗೂ ಪ್ರಾಣಿ-ತಳಿಗಳನ್ನು ಒಳಗೊಂಡಿದೆ. ಈ ಮೀನಿಗೆ ನಿರ್ದಿಷ್ಟ ಸಂರಕ್ಷಣೆಯ ಸ್ಥಾನ ಇರದಿರುವ ಕಾರಣದಿಂದ, ಮೀನಿನ ಸಂಖ್ಯೆಗಳ ಮೇಲ್ವಿಚಾರಣೆ ಇಲ್ಲದೆಯೆ ಅವುಗಳನ್ನು ಉಳಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಕೂಡ ಸಾಧ್ಯವಾಗಿಲ್ಲ.

ಸಿಡಿಮದ್ದುಗಳನ್ನು ಬಳಸಿಕೊಂಡು ಮಾಡುವ ಅತಿಯಾದ ಮೀನುಗಾರಿಕೆಯ ಕಾರಣದಿಂದ ಸಾಮೂಹಿಕವಾಗಿ ಮೀನುಗಳು ನಾಶವಾಗುತ್ತಿವೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಮಾನವನ ಸ್ವಾರ್ಥಕ್ಕಾಗಿ ತನಗಿಷ್ಟ ಬಂದಂತೆ ನಿರ್ಮಿಸಿಕೊಳ್ಳುವ ಆಣೆಕಟ್ಟುಗಳು, ಕಾವೇರಿ ನದಿಯುದ್ದಕ್ಕೂ ಕಟ್ಟಲಾಗಿರುವ ತಡೆಗೋಡೆಗಳು ಗೂನು ಬೆನ್ನಿನ ಮಹಶೀರ್ ಮೀನಿಗೆ ಹಾನಿಯನ್ನುಂಟು ಮಾಡಿವೆ. 2004 ರಿಂದ ಈಚೆಗೆ, ಮೀನು ಹಿಡಿಯುವವರ ಸಹಾಯದಿಂದ ಕಲೆ ಹಾಕಿರುವ ಮಾಹಿತಿಯ ಪ್ರಕಾರ, ಈ ತಳಿಯ ಮೀನಿನ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿರುವುದು ಕಂಡು ಬಂದಿದ್ದು, ಈ ಮೀನನ್ನು ಅಳಿವಿನಂಚಿಗೆ ನೂಕಿದೆ.

“ಈ ಜಾತಿಯ ಮೀನುಗಳನ್ನು ರಕ್ಷಿಸುವುದು ಅನಿವಾರ್ಯ ಎಂಬುದು ನಮ್ಮ ಅರಿವಿನಲ್ಲಿತ್ತು. ಕಾವೇರಿ ನದಿಯ ಈ ಸಾಂಪ್ರದಾಯಿಕ ಜಾತಿಯ ಮೀನು ನಾಶವಾದಲ್ಲಿ, ಅದರಿಂದ ನದಿಯಲ್ಲಿ ಅನೇಕ ತ್ವರಿತ ಪರಿಣಾಮಗಳೂ ಸಹ ಉಂಟಾಗಬಹುದು. ಇವು ಪರಭಕ್ಷಕ ಜೀವಿಗಳಾಗಿರುವುದರಿಂದ ಗೂನು ಬೆನ್ನಿನ ಮಹಶೀರ್ ಮೀನಿನ ನಾಶವು ನದಿಯ ಉಳಿದ ಜೀವಿಗಳ ಸಂಖ್ಯೆಯನ್ನು ಹೆಚ್ಚಿಸಿ, ವಿಶಾಲವಾದ ಜೀವವೈವಿಧ್ಯತೆಗೂ ಸಹ ಎಡೆಮಾಡಿ ಕೊಡಬಹುದು” ಎನ್ನುವ ಸೂಕ್ಷ್ಮ ಸಂದೇಶವನ್ನು ಆಡ್ರಿಯನ್ ನೀಡುತ್ತಾರೆ.

ಈ ಮೀನಿಗೆ ವೈಜ್ಞಾನಿಕ ಹೆಸರನ್ನು ನೀಡುವ ದೃಷ್ಟಿಯಿಂದ ಮೊದಲ ಹಂತವಾಗಿ ವಿಜ್ಞಾನಿಗಳು ವರ್ಗೀಕರಣಕ್ಕೆ ಸಹಾಯವಾಗುವಂತಹ ಇವುಗಳ ಮಾದರಿಗಳನ್ನು ಸಂಗ್ರಹಿಸಲಾರಂಭಿಸಿದರು. ಇದರ ಸಲುವಾಗಿಯೆ ಕಾವೇರಿ ನದಿಯ ಹರಿವಿರುವಂತಹ ರಾಜ್ಯಗಳಾದ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ವಿಜ್ಞಾನಿಗಳನ್ನೊಳಗೊಂಡತಹ ಒಂದು ವಿಶೇಷ ತಂಡವೊಂದನ್ನು ನಿರ್ಮಿಸಿ, ಮೀನಿನ ದೇಹದ ಉದ್ದಳತೆ ಹಾಗೂ ಡಿಎನ್ಎ ಸ್ಯಾಂಪಲ್ಗಳನ್ನು ಕಲೆಹಾಕಿದರು.

“ಇದು ಅಳಿವಿನಂಚಿನಲ್ಲಿರುವ ಜೀವರಾಶಿ ಎಂದು ತಿಳಿಯುವಷ್ಟರಲ್ಲಿಯೇ, ಇವುಗಳ ಮಾದರಿಗಳನ್ನು ಹುಡುಕುವುದು ಬಹುದೊಡ್ಡ ಸವಾಲು ಎಂಬುದರ ಅರಿವು ನಮಗಾಗತೊಡಗಿತು” ಎಂದು ತಮ್ಮ ಅನುಭವವನ್ನು ಆಡ್ರಿಯನ್ ಹಂಚಿಕೊಳ್ಳುತ್ತಾರೆ.

ಕೊನೆಗೂ ವಿಜ್ಞಾನಿಗಳು ಸ್ಥಳೀಯ ಬುಡಕಟ್ಟು ಜನಾಂಗದ ಬೆಸ್ತರು ಹಾಗೂ ಮೀನುಗಾರರ ಸಹಾಯದಿಂದ ತಮಿಳುನಾಡಿನ ಮೊಯ್ಯಾರ್ ನದಿಯಲ್ಲಿ ಮಹಶೀರ್ ಮೀನಿನ ಸಂಖ್ಯೆ ಹೆಚ್ಚಿಗೆ ಇರುವುದನ್ನು ಕಂಡುಹಿಡಿದರು.

ಇಲ್ಲಿ ನಡೆಸಿದ ಅಧ್ಯಯನಗಳು ಹಾಗೂ ವಿಶ್ಲೇಷಣೆಗಳು ತೋರಿಸುವಂತೆ, ಗೂನು ಬೆನ್ನಿನ ಮಹಶೀರ್ ಮೀನಿನ ಡಿಎನ್ಎ ಕ್ರಮವು ವಿಶಿಷ್ಟವಾಗಿದೆ, ಇದು ಹಿಂದೆ ವಿವರಿಸಿದ ಎಲ್ಲಾ ಜಾತಿಗಳ ಮೀನುಗಳಿಗಿಂತ ಭಿನ್ನವಾಗಿದೆ ಎಂಬುದು ನಿಜಕ್ಕೂ ಕುತೂಹಲಕಾರಿ ಸಂಗತಿ. ಸಂಶೋಧಕರು ತಾವು ಹೊಸ ಜಾತಿ ಮೀನೊಂದನ್ನು ಗುರುತಿಸಿದ್ದೇವೆಯೆಂದೇ ನಂಬಿದ್ದರು. ಆದರೆ 2007 ರ ಅಧ್ಯಯನವೊಂದು ಅದಾಗಲೇ ಈ ತರಹದ ಮೀನಾದ ‘ಟಾರ್ ರೆಮಾದೇವಿ’ ಬಗ್ಗೆ ವಿಶ್ಲೇಷಿಸಿರುವುದು ಕಂಡುಬಂದಿತು. ಆದರೆ ಈ ಅಧ್ಯಯನದ ಮಾಹಿತಿಗಳು ಪೂರ್ಣ ಪ್ರಮಾಣದ್ದಾಗಿರಲಿಲ್ಲ. ಕಾವೇರಿ ನದಿಯ ಉಪನದಿಯಾದ, ತಮಿಳುನಾಡು ಹಾಗೂ ಕೇರಳದ ಪಂಬರ್ ನಲ್ಲಿ ಕಂಡು ಬರುವ ಒಂದು ಪುಟ್ಟ ಮೀನಿನ ಜಾತಿಯ ಕೆಲವು ಮಾದರಿಗಳನ್ನು ಮಾತ್ರವೇ ಇದು ಸಂಗ್ರಹಿಸಿತ್ತು. 

ಆದರೆ ಈ ಮಾಹಿತಿ ಇನ್ನಷ್ಟು ಕುತೂಹಲವನ್ನು ಕೆರಳಿಸಿತು. ಇದರ ಪರಿಣಾಮವಾಗಿ ಸಂಶೋಧಕರು ಟಾರ್ ರೆಮಾದೇವಿ ಮೀನಿನ ಭೌಗೋಳಿಕ ಮೂಲವನ್ನು ಹುಡುಕಲು ಹೊರಟರು. ಮ್ಯೂಸಿಯಂನ ಕೆಲವು ಮಾದರಿಗಳನ್ನು ವಿವರವಾಗಿ ಪರಿಶೀಲಿಸಿದರು. ಈ ತನಿಖೆಯ ಫಲಿತಾಂಶಗಳು ಗೂನು ಬೆನ್ನಿನ ಮಹಶೀರ್ ಮೀನು ವಾಸ್ತವವಾಗಿ ಟಾರ್ ರೆಮಾದೇವಿಯನ್ನೇ ಹೋಲುತ್ತದೆ ಎಂದು ದೃಢಪಡಿಸಿದವು. ಇದೇ ಆಧಾರದ ಮೇರೆಗೆ ಸಂಶೋಧಕರು ತಮ್ಮ ಸಂಶೋಧನೆಗಳನ್ನು PLOS ONE ಪತ್ರಿಕೆಯಲ್ಲಿ ಪ್ರಕಟಿಸಿದರು.

ಈ ಸಂಶೋಧನಾ ಅಧ್ಯಯನ ವಿಜ್ಞಾನ ಜಗತ್ತಿನಲ್ಲಿ ಎಂತಹ ಸಂಚಲನವನ್ನು ಸೃಷ್ಟಿಸಿತೆಂದರೆ, ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (ಐ.ಯು.ಸಿ.ಎನ್.) ಕೂಡಲೆ ಎಲ್ಲಾ ತಜ್ಞರ ಒಂದು ತುರ್ತು ಸಭೆಯನ್ನು ಪುಣೆಯಲ್ಲಿ  ಏರ್ಪಡಿಸಿತು. ಸಭೆಯಲ್ಲಿ ‘ಟಾರ್ ರೆಮಾದೇವಿ’ಯ ರೆಡ್ ಲಿಸ್ಟ್ ಅಸೆಸ್ಮೆಂಟ್ನ ಕರಡು ಪ್ರತಿ ಸಿದ್ಧವಾಯಿತು ಅಂದರೆ ಈ ಮೀನನ್ನು ‘ಅಳಿವಿನಂಚಿನಲ್ಲಿರುವ ತಳಿ’ಗಳ ಪಟ್ಟಿಗೆ ಸೇರಿಸುವ ಕರಡು ಪ್ರತಿಯನ್ನು ಸಿದ್ಧಪಡಿಸಲಾಯಿತು. "ಜೀವರಾಶಿಗಳನ್ನು ಹಾಗೂ ಅವುಗಳ ವಿಶಿಷ್ಟ ತಳಿಗಳನ್ನು ವಿನಾಶದಿಂದ ರಕ್ಷಿಸಲು, ಅವುಗಳಿಗೆ ಅತೀ ಅಗತ್ಯವಾದ ರಕ್ಷಣೆ ಮತ್ತು ತಕ್ಷಣದ ಸಂರಕ್ಷಣಾ ಯೋಜನೆಯನ್ನು ನೀಡುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಕ್ರಮವಾಗಿದೆ" ಎಂದು ಆಡ್ರಿಯನ್ ವಿವರಿಸುತ್ತಾರೆ. 

“ಸದ್ಯದ ಪರಿಸ್ಥಿತಿಯಲ್ಲಿ ಗೂನು ಬೆನ್ನಿನ ಮಹಶೀರ್ ಮೀನು ಒಂದು ನಿರ್ಬಂಧಿತ ಹಾಗೂ ಅಪಾಯಕಾರಿ ಸ್ಥಿತಿಯಲ್ಲಿರುವ ತಳಿಯಾಗಿದೆ. ಇದನ್ನುಳಿಸುವ ದೃಷ್ಟಿಯಲ್ಲಿ ಅತೀಯಾದ ಗಮನ ಹಾಗೂ ಕಾರ್ಯ ಎರಡರ ಅವಶ್ಯಕತೆಯೂ ಇದೆ” ಎಂಬ ಕಳಕಳಿಯ ಮಾಹಿತಿಯನ್ನು, ಕೇರಳದ ‘ಮೀನುಗಾರಿಕೆ ಮತ್ತು ಸಾಗರ ಅಧ್ಯಯನ’ಗಳ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ರಾಜೀವ್ ರಾಘವನ್ ನೀಡುತ್ತಾರೆ. ಇವರು ಐ.ಯು.ಸಿ.ಎನ್ ನ ಫ್ರೆಶ್ವಾಟರ್ ಫಿಶ್ ರೆಡ್ ಲಿಸ್ಟ್ ಅಥಾರಿಟಿಯ ಸಂಯೋಜಕರು ಹಾಗೂ ಈ ಅಧ್ಯಯನದ ಸಹ-ಲೇಖಕರೂ ಕೂಡ ಹೌದು.

“ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಜೀವ ನದಿಯಾಗಿರುವ ಕಾವೇರಿಯಲ್ಲಿನ ಈ ಅಪರೂಪದ ಗೂನು ಬೆನ್ನಿನ ಮಹಶೀರ್ ಮೀನಿನ  ಭವಿಷ್ಯ ದಕ್ಷಿಣ ಭಾರತದ ಪಾಲುದಾರರ ಇಚ್ಛಾಶಕ್ತಿ ಹಾಗೂ ಸಹಕಾರದ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿದೆ” ಎಂದು ಡಾ. ರಾಜೀವ್ ತಮ್ಮ ಮಾತನ್ನು ಮುಂದುವರೆಸುತ್ತಾರೆ.

"ನಾವು ಅಳಿವಿನಂಚಿನಲ್ಲಿರುವ ಪ್ರಭೇದಗಳ ಬಗ್ಗೆ ಚರ್ಚಿಸುವಾಗ ದೈತ್ಯ ಪಾಂಡಾ ಮತ್ತು ಬಂಗಾಳದ ಹುಲಿಗಳಂತಹ 'ಪ್ರಮುಖ' ಜಾತಿಗಳ ಬಗ್ಗೆಯೇ ಯೋಚಿಸುತ್ತೇವೆ. ಇವೆರಡನ್ನೂ ಸಹ ಪ್ರಸ್ತುತವಾಗಿ ಐ.ಯು.ಸಿ.ಎನ್. ನ ಪಟ್ಟಿಯಲ್ಲಿ 'ದುರ್ಬಲ' ಮತ್ತು 'ಅಪಾಯಕಾರಿ' ಎಂದು ಪರಿಗಣಿಸಲಾಗಿದೆ. ಆದರೆ ‘ಗೂನು ಬೆನ್ನಿನ ಮಹಶೀರ್ ಮೀನು’ ಇಂದು ಉಳಿದೆರಡು ಚಿರಪರಿಚಿತ ಜೀವಿಗಳಿಗಿಂತಲೂ ಆತಂಕಕಾರಿ ಸ್ಥಿತಿಯಲ್ಲಿದೆ. ಆದ್ದರಿಂದ ಈಗಾಗಲೆ ವೈಜ್ಞಾನಿಕ ಹೆಸರನ್ನು ನೀಡಲಾಗಿರುವ ಹಿನ್ನಲೆಯಲ್ಲಿ, ಅಧಿಕೃತವಾಗಿ ಈ ಮೀನನ್ನು ‘ಅಪಾಯಕಾರಿ ಸ್ಥಿತಿಯಲ್ಲಿರುವ ಜೀವಿ’ ಎಂದು ವರ್ಗೀಕರಿಸಬಹುದು. ಪರಿಣಾಮವಾಗಿ ಭವಿಷ್ಯದಲ್ಲಿ ಅದರ ಉಳಿಯುವಿಕೆಯನ್ನು ಖಚಿತಪಡಿಸಿಕೊಳ್ಳಲು ದೃಢವಾದ ಕ್ರಮಗಳನ್ನು ನಾವು ಕೈಗೊಳ್ಳಬಹುದು" ಎಂದು ಅಧ್ಯಯನದ ಪರಿಣಾಮಗಳ ಬಗ್ಗೆ ಆಡ್ರಿಯನ್ ವಿವರಿಸುತ್ತಾರೆ. 

Kannada

Recent Stories

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
Lockeia gigantus trace fossils found from Fort Member. Credit: Authors

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಸಂಶೋಧಕರು ಜೈಸಲ್ಮೇರ್ ನಗರದ ಬಳಿಯ ಜೈಸಲ್ಮೇರ್ ರಚನೆಯಲ್ಲಿ ಲಾಕಿಯಾ ಜೈಗ್ಯಾಂಟಸ್ ಪಳೆಯುಳಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಭಾರತದಿಂದ ಇಂತಹ ಪಳೆಯುಳಿಕೆಗಳ ಮೊದಲ ದಾಖಲೆ ಮಾತ್ರವಲ್ಲ, ಇದುವರೆಗೆ ಪತ್ತೆಯಾದ ಅತಿದೊಡ್ಡ ಲಾಕಿಯಾ ಕುರುಹುಗಳು.

ಲೇಖಕರು
ಇಂಡೋ-ಬರ್ಮೀಸ್ ಪ್ಯಾಂಗೊಲಿನ್ (ಮನಿಸ್ ಇಂಡೋಬರ್ಮಾನಿಕಾ). ಕೃಪೆ: ವಾಂಗ್ಮೋ, ಎಲ್.ಕೆ., ಘೋಷ್, ಎ., ಡೋಲ್ಕರ್, ಎಸ್. ಮತ್ತು ಇತರರು.

ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಲೇಖಕರು
ಸ್ಪರ್ಶರಹಿತ ಬೆರಳಚ್ಚು ಸಂವೇದಕದ ಪ್ರಾತಿನಿಧಿಕ ಚಿತ್ರ

ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಲೇಖಕರು
ಮೈಕ್ರೋಸಾಫ್ಟ್ ಡಿಸೈನರ್ ನ ಇಮೇಜ್ ಕ್ರಿಯೇಟರ್ ಬಳಸಿ ಚಿತ್ರ ರಚಿಸಲಾಗಿದೆ

ಐಐಟಿ ಬಾಂಬೆಯ ಸಂಶೋಧಕರು ಶಾಕ್‌ವೇವ್-ಆಧಾರಿತ ಸೂಜಿ-ಮುಕ್ತ ಸಿರಿಂಜ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಸೂಜಿಗಳಿಲ್ಲದೆ ಔಷಧಿಗಳನ್ನು ಪೂರೈಸುವ ಮಾರ್ಗವನ್ನು ಕಂಡುಹಿಡಿದಿದ್ದಾರೆ.

ಲೇಖಕರು
ಅತ್ಯಂತ ಪ್ರಾಚೀನ ವಸ್ತುವಿನ ಅಧ್ಯಯನ

ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಲೇಖಕರು
ಕಾಂಕ್ರೀಟ್‌ ಪರೀಕ್ಷೆಗೆ ಪ್ರೋಬ್‌

ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ.

ಲೇಖಕರು
‘ದ್ವಿಪಾತ್ರ’ದಲ್ಲಿ ಮೈಕ್ರೋ ಆರ್‌ಎನ್‌ಎ

ವೈರಲ್ ಸೋಂಕುಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳಲ್ಲಿ ಮೈಕ್ರೋ ಆರ್‌ಎನ್‌ಎ ‘ದ್ವಿಪಾತ್ರ’ದಲ್ಲಿ ಕೆಲಸ ಮಾಡುತ್ತದೆ. 

ಲೇಖಕರು
ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳು

ಐಐಟಿ ಬಾಂಬೆ ಯ ಬ್ಯಾಟರಿ ಪ್ರೋಟೋಟೈಪಿಂಗ್ ಲ್ಯಾಬ್ ನ ಸಂಶೋಧಕರು ಇಂಧನ (ಶಕ್ತಿ) ಶೇಖರಣಾ ಸಾಧನವಾಗಿರುವ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. 

Loading content ...
Loading content ...
Loading content ...
Loading content ...
Loading content ...